ಪ್ರಣಯ ಕೋಪದ ಸೊಗಸು

இல்லை தவறவர்க்கு ஆயினும் ஊடுதல்
வல்லது அவர்அளிக்கு மாறு.   (1321)

ಅವರಲ್ಲಿ ದೋಷವೊಂದೂ ಇಲ್ಲವಾದರೂ ಅವರೊಂದಿಗೆ ಪ್ರಣಯದ ಮುನಿಸಿ ತೋರುವುದರಿಂದ ಅವರು ನನ್ನ ಮೇಲೆ ಅಧಿಕವಾದ ಪ್ರೀತಿ ತೋರುವಂತೆ ಮಾಡಬಲ್ಲುದು.

ஊடலின் தோன்றும் சிறுதுனி நல்லளி
வாடினும் பாடு பெறும்.   (1322)

ಪ್ರಣಯದ ಹುಸಿ ಮುನಿಸಿನಿಂದ ಕಾಣಿಸಿಕೊಳ್ಳುವ ಕಿರು ದುಃಖದಿಂದಾಗಿ, ಪ್ರಿಯತಮನ ನಿರ್ಮಲ ಪ್ರೀತಿಯು ಬಾಡಿದರೂ ಅಂತ್ಯದಲ್ಲಿ ಅದು ಹಿರಿಮೆಯನ್ನು ಪಡೆಯುವುದು.

புலத்தலின் புத்தேள்நாடு உண்டோ நிலத்தொடு
நீரியைந் தன்னார் அகத்து.   (1323)

ನೆಲದೊಂದಿಗೆ ನೀರು ಬೆರೆತಿರುವಂತಹ ಪ್ರೀತಿಯುಳ್ಳ ಪ್ರಿಯತಮನ ಬಳಿ ಪ್ರಣಯ ಕೋಪವನ್ನು ತೋರುವುದಕ್ಕಿಂತ ಸುಖ ತರುವ ಸ್ವರ್ಗಲೋಕವು ಬೇರೆ ಉಂಟೋ!

புல்லி விடாஅப் புலவியுள் தோன்றுமென்
உள்ளம் உடைக்கும் படை.   (1324)

ಪ್ರಿಯತಮನನ್ನು ಅಪ್ಪಿಕೊಂಡು ಬಿಡದಿರಲು ಕಾರಣವಾದ ಪ್ರಣಯದ ಮುನಿಸಿನಲ್ಲಿ ನನ್ನ ಹೃದಯವನ್ನು ಒಡೆಯಬಲ್ಲ ಅಸ್ತ್ರವೊಂದು ತೋರುತ್ತಿದೆ.

தவறிலர் ஆயினும் தாம்வீழ்வார் மென்றோள்
அகறலின் ஆங்கொன் றுடைத்து.   (1325)

ದೋಷವಿಲ್ಲದವರಾಗಿಯೂ ಪ್ರಿಯತಮೆಯ ಮುನಿಸಿಗೆ ಎರವಾಗಿ, ತಾವು ಪ್ರೀತಿಸುವ ಹೆಣ್ಣುಗಳ ಮೆದುದೋಳುಗಳನ್ನು ದೂರ ಸರಿಸುವುದರಲ್ಲಿಯೂ ಒಣ್ದು ರೀತಿಯ ಸುಖವು ಇರುವುದು.

உணலினும் உண்டது அறல்இனிது காமம்
புணர்தலின் ஊடல் இனிது.   (1326)

ಮೇಲೆ ಮೇಲೆ ಊಟ ಮಾಡುವುದಕ್ಕಿಂತೆ, ಉಂಡುದನ್ನು ಅರಗಿಸಿಕೊಳ್ಳುವುದು ಸುಖ ತರುವುದು; (ಅದರಂತೆ) ಪ್ರೇಮದಲ್ಲಿ ಕೂಡಿ ಮತ್ತೆ ಮತ್ತೆ ಸುಖಿಸುವುದಕ್ಕಿಂತ, ಪ್ರೇಮದ ಮುನಿಸೇ ಕಾಮಕ್ಕೆ ಮಿಗಿಲಾದ ಸುಖ ಕೊಡುವುದು.

ஊடலில் தோற்றவர் வென்றார் அதுமன்னும்
கூடலிற் காணப் படும்.   (1327)

ಪ್ರನಯ ಕಲಹದಲ್ಲಿ ಸೋತವರೇ ಗೆದ್ದವರು; ಅದು ನಿಶ್ಚಯವಾಗಿ ಮುನಿಸು ತೀರದ ಮೇಲೆ ಕೂಡಿ ಆನಂದಿಸುವುದರಲ್ಲಿ ವ್ಯಕ್ತವಾಗುವುದು.

ஊடிப் பெறுகுவம் கொல்லோ நுதல்வெயர்ப்பக்
கூடலில் தோன்றிய உப்பு.   (1328)

ಅವಳ ನೊಸಲು ಬೆವರುವಂತೆ ಕೂಡಿ, ಆ ಕಾಮ ಸುಖವನ್ನು ಇನ್ನೊಮ್ಮೆ ಅವಳ ಪ್ರಣಯದ ಮುನಿಸಲ್ಲಿರುವಾಗ ಪಡೆದು ಆನಂದಿಸುವೆನಲ್ಲವೆ?

ஊடுக மன்னோ ஒளியிழை யாமிரப்ப
நீடுக மன்னோ இரா.   (1329)

ಆ ಚೆಲುವಿನ ಬೆಡಗುಗಾತಿ ಇನ್ನೂ ಪ್ರಣಯ ಮುನಿಸನ್ನು ತೋರುವವಳಾಗಲಿ! ನಾನು ಅವಳ ಮುನಿಸನ್ನು ತಣಿಸುವಂತೆ ಬೇಡಿಕೊಳ್ಳಲು, ರಾತ್ರಿ ಕಾಲವು ಮತ್ತಷ್ಟು ದೀರ್ಘವಾಗಲಿ.

ஊடுதல் காமத்திற்கு இன்பம் அதற்கின்பம்
கூடி முயங்கப் பெறின்.   (1330)

ಪ್ರಣಯದ ಮುನಿಸು ಪ್ರೇಮಕ್ಕೆ ಸೊಗಸು; ಮುನಿಸು ತೀರದ ಮೇಲೆ ಕೂಡಿ ಅಪ್ಪಿಕೊಂಡರೆ ಆ ಮುನಿಸಿನ ಸೊಗಸಿಗೂ ಮಿಗಿಲು.