ಸ್ನೇಹ

செயற்கரிய யாவுள நட்பின் அதுபோல்
வினைக்கரிய யாவுள காப்பு.   (781)

ಸ್ನೇಹಕ್ಕಿಂತ ಪಡೆಯಲು ಕಷ್ಟವಾದ ವಸ್ತು ಯಾವುದಿದೆ? ಹಾಗೆ ಪಡೆದುಕೊಂಡ ಸ್ನೇಹಕ್ಕಿಂತ ಶತ್ರುಗಳ ಸಂಚನ್ನು ಮುರಿಯಲು ಮಿಗಿಲಾದ ರಕ್ಷಣೆ (ಅರಸನಿಗೆ) ಬೇರೆ ಯಾವುದೆ?

நிறைநீர நீரவர் கேண்மை பிறைமதிப்
பின்னீர பேதையார் நட்பு.   (782)

ತುಂಬಿದ ಅರಿವುಳ್ಳವರ ಗೆಳೆತನ ಬಿದಿಗೆಯ ಚಂದ್ರನು ವರ್ಧಿಸಿದಂತೆ; ಅರಿವುಗೇಡಿಗಳ ಕೆಳೆತನ ಪೂರ್ಣ ಚಂದ್ರ ತೇಯುತ್ತ ಕ್ಷಯಿಸುವಂತೆ.

நவில்தொறும் நூல்நயம் போலும் பயில்தொறும்
பண்புடை யாளர் தொடர்பு.   (783)

ಒಳ್ಳೆಯ ಗ್ರಂಥಗಳನ್ನು ಓದುತ್ತ ಓದುತ್ತ ಮನಸ್ಸು ಆನಂದಿಂದ ವಿಕಾಸವಾಗುವಂತೆ, ಸದ್ಗುಣೆಗಳ ಸ್ನೇಹವೂ ಪಳಗಿದಂತೆಲ್ಲ ಹೆಚ್ಚು ಸಂತೃಪ್ತಿಯನ್ನು ತರುವುದು.

நகுதற் பொருட்டன்று நட்டல் மிகுதிக்கண்
மேற்செனறு இடித்தற் பொருட்டு.   (784)

ಸ್ನೇಹ ಮಾಡುವುದು ಬರಿಯ ಸಂತೋಷಕ್ಕಾಗಿ ಅಲ್ಲ; ಸ್ನೇಹಿತರಾದವರು ದಾರಿತಪ್ಪಿದಾಗ ಮುಂದೆ ನಿಂತು ಅವರ ತಪ್ಪುಗಳನ್ನು ನಿಷ್ಠುರವಾಗಿ ಎತ್ತಿ ಹೇಳಬೇಕು.

புணர்ச்சி பழகுதல் வேண்டா உணர்ச்சிதான்
நட்பாங் கிழமை தரும்.   (785)

ನಿಕಟವಾದ ಒಡನಾಟವಾಗಲೀ, ಪರಸ್ಪರ ಬಳಕೆಯಾಗಲೀ ಸ್ನೇಹಕ್ಕೆ ಅಗತ್ಯವಿಲ್ಲ; ಒಬ್ಬರನ್ನೊಬ್ಬರು (ಅಂತರಂಗದಲ್ಲಿ) ಅರಿತು ನಡೆದುಕೊಳ್ಳುವುದರಿಂದ ಸ್ನೇಹದ ಹಕ್ಕನ್ನು ಪಡೆಯುಬಹುದು.

முகநக நட்பது நட்பன்று நெஞ்சத்து
அகநக நட்பது நட்பு.   (786)

ಕಂಡಾಗ ಮುಖದಲ್ಲಿ ಮಾತ್ರ ನಗೆ ಸೂಸುವ ಕೆಳೆತನವು ಕೆಳೆ ಎನಿಸಿಕೊಳ್ಳುವುದಿಲ್ಲ; ಪ್ರೀತಿಯಿಂದ ಹೃದಯವರಳಿಸಿ ಸಕ್ಕಾಗ ಅದು ಸ್ನೇಹವೆನಿಸಿಕೊಳ್ಳುವುದು.

அழிவி னவைநீக்கி ஆறுய்த்து அழிவின்கண்
அல்லல் உழப்பதாம் நட்பு.   (787)

ಆಪ್ತನಾದವನ್ನು ಕೇಡಿನ ಮಾರ್ಗದಿಂದ ತಪ್ಪಿಸಿ, ಅವನನ್ನು ಸನ್ಮಾರ್ಗದಲ್ಲಿ ನಡೆಸಿ, ಆಪತ್ಕಾಲದಲ್ಲಿ ಅವನೊಡನಿದ್ದು ದುಃಖದಲ್ಲಿ ಪಾಲ್ಗೊಳ್ಳುವುದೇ ಸ್ನೇಹವೆನಿಸುವುದು.

உடுக்கை இழந்தவன் கைபோல ஆங்கே
இடுக்கண் களைவதாம் நட்பு.   (788)

(ಸಭೆಯಲ್ಲಿ) ತೊಟ್ಟ ಉಡುಗೆ ಚಾರಿದರೆ ಕೂಡಲೇ ಕೈ ಅದನ್ನು ಹಿಡಿದು ಕೊಳ್ಳುವಂತೆ, ಗೆಳೆಯನ ಸಂಕಟ ಕಾಲದಲ್ಲಿ ಕೂಡಲೇ ನೆರವಾಗಿ ಅವನ ಕಷ್ಟವನ್ನು ಪರಿಹರಿಸುವುದೇ ಗೆಳೆತನವೆನ್ನಿಸಿಕೊಳ್ಳುತ್ತದೆ.

நட்பிற்கு வீற்றிருக்கை யாதெனின் கொட்பின்றி
ஒல்லும்வாய் ஊன்றும் நிலை.   (789)

ಗೆಳೆತನಕ್ಕೆ ಉನ್ನತವಾದ ನೆಲೆ ಯಾವುದೆಂದರೆ ಗೆಳೆಯನಿಂದ ಬೇರೆಯಾಗದೆ ಸಾಧ್ಯವಾದಾಗಲೆಲ್ಲ ಅವನ ಸಂಕಟದ ವೇಳೆಯಲ್ಲಿ ನೆರವಾಗಿ ನಿಲ್ಲುವುದು.

இனையர் இவரெமக்கு இன்னம்யாம் என்று
புனையினும் புல்லென்னும் நட்பு.   (790)

ಇವರು ನಮಗೆ ಬಹಳ ಬೇಕಾದವರು, ನಾವು ಅವರಿಗೆ ಬಹಳ ಬೇಕಾದವರು'. ಎಂದು ಪರಸ್ಪರ ಪ್ರಶಂಸಿಸಿಕೊಳ್ಳುವುದು ಸ್ನೇಹವನ್ನು ಕೀಳು ಮಾಡುತ್ತದೆ.