ಕೊಲ್ಲದಿರುವುದು

அறவினை யாதெனின் கொல்லாமை கோறல்
பிறவினை எல்லாந் தரும்.   (321)

ಧರ್ಮವಾದ ಕಾರ್ಯ ಯಾವುದೆಂದರೆ ಕೊಲ್ಲದಿರುವುದು; ಕೊಲ್ಲುವುದು ಧರ್ಮವಲ್ಲದ ಪಾಪ ಕಾರ್ಯಗಳನ್ನು ಉಂಟು ಮಾಡುವುದು.

பகுத்துண்டு பல்லுயிர் ஓம்புதல் நூலோர்
தொகுத்தவற்றுள் எல்லாந் தலை.   (322)

ಇದ್ದುದನ್ನು ಹಂಚಿಕೊಂಡು ಉಂಟು ಹಲವು ಜೀವಗಳನ್ನು ಕಾಪಾಡುವುದೇ, ಶಾಸ್ತ್ರಜ್ಞರು ಹೇಳಿರುವ ಧರ್ಮಗಳಲ್ಲೆಲ್ಲ ಮಿಗಿಲಾದುದು.

ஒன்றாக நல்லது கொல்லாமை மற்றதன்
பின்சாரப் பொய்யாமை நன்று.   (323)

ಕೊಲ್ಲದಿರುವುದು ಎಲ್ಲದಕ್ಕೂ ಮೇಲಾದ ಒಳ್ಳೆಯ ಗುಣ; ಸುಳ್ಳು ಹೇಳದಿರುವುದು ಅದಕ್ಕೆ ಎರಡನೆಯದು.

நல்லாறு எனப்படுவது யாதெனின் யாதொன்றும்
கொல்லாமை சூழும் நெறி.   (324)

ಯಾವೊಂದು ಪ್ರಾಣಿಯನ್ನು ಕೊಲ್ಲುವುದನ್ನು ತಪ್ಪಿಸುವ ಮಾರ್ಗವೇ ಶಾಸ್ತ್ರಗ್ರಂಥಗಳು ಹೇಳುವ ಮಾರ್ಗಗಳಲ್ಲೆಲ್ಲ ಒಳ್ಳೆಯದು.

நிலைஅஞ்சி நீத்தாருள் எல்லாம் கொலைஅஞ்சிக்
கொல்லாமை சூழ்வான் தலை.   (325)

ಸಂಸಾರ, ಹುಟ್ಟುಗಳ ನೆಲೆಗಂಜಿ, ಆಶಗಳನ್ನು ತೊರೆದು ಸನ್ಯಾಸಿಗಳಾದವರಲ್ಲಿಯೂ, ಕೊಲೆಗಂಜಿ ಕೊಲ್ಲದಿರುವ ಧರ್ಮವನ್ನು ಕೈಕೊಂಡವರೇ ಮೇಲಾದವರು ಎನಿಸಿಕೊಳ್ಳುತ್ತಾರೆ.

கொல்லாமை மேற்கொண் டொழுகுவான் வாழ்நாள்மேல்
செல்லாது உயிருண்ணுங் கூற்று.   (326)

ಕೊಲ್ಲದಿರುವ ಧರ್ಮವನ್ನು ಕೈಕೊಂಡು ನಡೆಯುವವನ ಬಾಳನಡೆಯ ಮೇಲೆ ಜೀವಗಳನ್ನು ಕೊಂಡುಂಬ ಮೃತ್ಯು ಬಂದು ಎರಗಲಾರದು.

தன்னுயிர் நீப்பினும் செய்யற்க தான்பிறிது
இன்னுயிர் நீக்கும் வினை.   (327)

ತನ್ನ ಪ್ರಾಣ ಹೋದರೂ (ಅದರ ರಕ್ಷಣೆಗಾಗಿ) ಬೇರೊಂದು ಇನಿಯೊಡಲನ್ನು ಕೊನೆಗಾಣಿಸುವ ಕೊಲೆಗೆಲಸ ಮಾಡಬಾರದು.

நன்றாகும் ஆக்கம் பெரிதெனினும் சான்றோர்க்குக்
கொன்றாகும் ஆக்கங் கடை.   (328)

(ಯಜ್ಞ ಯಾಗಾದಿಗಳಲ್ಲಿ) ಕೊಲೆ ಮಾಡುವುದರಿಂದ ಎಷ್ಟೇ ಹಿರಿದಾದ ಸುಖ ಸಂಪತ್ತುಗಳು ಉಂಟಾದರೂ, ತಿಳಿದವರ ದೃಷ್ಟಿಯಲ್ಲಿ, ಕೊಲ್ಲುವುದರಿಂದ ಬರುವ ಸಿರಿಯು ಕೀಳಾದುದು.

கொலைவினைய ராகிய மாக்கள் புலைவினையர்
புன்மை தெரிவா ரகத்து.   (329)

ಕೀಳು ಕೆಲಸ ಯಾವುದು ಎಂದು ತಿಳಿದವರ ಮನಸ್ಸಿನಲ್ಲಿ, ಕೊಲೆಗೆಲಸ ಮಾಡುವವರು ಹೊಲೆಗೆಲಸದವರೆಂದು ಗಣಿಸಲ್ಪಡುತ್ತಾರೆ.

உயிர் உடம்பின் நீக்கியார் என்ப
செயிர் உடம்பின் செல்லாத்தீ வாழ்க்கை யவர்.   (330)

(ಹಿಂದಿನ ಜನ್ಮದಲ್ಲಿ) ಪ್ರಾಣವನ್ನು ಒಡಲಿನಿಂದ ಬೇರ್ಪಡಿಸಿದವರೇ (ಕೊಲೆಗಡುಕರೇ) ಈ ಜನ್ಮದಲ್ಲಿ ರೋಗರುಜಿನಗಳಿಂದ ನವೆದು ಕೀಳಾದ ಬಾಳು ನಡೆಸುವರು ಎಂದು (ಬಲ್ಲವರು) ಹೇಳುವರು.