ವದಂತಿಯನ್ನು ಕುರಿತು ಆಡುವ

அலரெழ ஆருயிர் நிற்கும் அதனைப்
பலரறியார் பாக்கியத் தால்.   (1141)

(ನಮ್ಮಿಬ್ಬರ ಪ್ರಣಯದ ವಿಷಯವಾಗಿ) ವದಂತಿ ಎದ್ದು ನಮ್ಮ ಅಮೂಲ್ಯವಾದ ಪ್ರಾಣವು ಉಳಿದುಕೊಂಡಿತು. ಅದನ್ನು ನಮ್ಮ ಪುಣ್ಯ ವಶದಿಂದ ಹಲವರು ಅರಿಯರು!

மலரன்ன கண்ணாள் அருமை அறியாது
அலரெமக்கு ஈந்ததிவ் வூர்.   (1142)

ಹೂವಿನಂತಹ ಕಣ್ಗಳ ಚೆಲುವೆಯ ಸೌಂದರ್ಯದ ಬೆಲೆಯನ್ನು ಅರಿಯದ ಈ ಊರಿನ ಜನರು ವದಂತಿ ಹಬ್ಬಿಸಿ ಅವಳು ನನಗೆ ಸುಲಭಳಾಗುವಂತೆ ಮಾಡಿ ಉಪಕಾರ ಮಾಡಿದರು.

உறாஅதோ ஊரறிந்த கெளவை அதனைப்
பெறாஅது பெற்றன்ன நீர்த்து.   (1143)

ಊರಿನ ಜನರು ತಿಳಿದ ವದಂತಿಯು ನಮಗೆ ಅನುಕೂಲವಾಗಿಯೇ ಇದೆ ಅಲ್ಲವೆ? ಅದು ನಮಗೆ ಅಲಭ್ಯವಾದುದನ್ನು ಲಭ್ಯವಾಗಿ ಮಾಡಿದೆ.

கவ்வையால் கவ்விது காமம் அதுவின்றேல்
தவ்வென்னும் தன்மை இழந்து.   (1144)

ವದಂತಿಯಿಂದ ನಮ್ಮ ಕಾಮವು ವೃದ್ಧಿಸುತ್ತಿದೆ; ಅದಿಲ್ಲವಾಗಿದ್ದರೆ ಕಾಮವು ಸೊರಗಿ ನಶಿಸಿಹೋಗುವುದು.

களித்தொறும் கள்ளுண்டல் வேட்டற்றால் காமம்
வெளிப்படுந் தோறும் இனிது.   (1145)

ಕಳ್ಳು ಕುಡಿಯುವಾಗ, ಕುಡಿದಂತಲ್ಲಿ ಮತ್ತೆ ಮತ್ತೆ ಬಯಸುವಂತೆ ಕಾಮವು ವದಂತಿಯಿಂದ ಪ್ರಕಟವಾದಂತೆಲ್ಲ ಅದು ನನಗೆ ಮತ್ತಷ್ಟು ಇನಿದಾಗಿ ತೋರುವುದು.

கண்டது மன்னும் ஒருநாள் அலர்மன்னும்
திங்களைப் பாம்புகொண் டற்று.   (1146)

ನಾನು ನನ್ನ ಇನಿಯನನ್ನು ಕಂಡದ್ದು ಒಂದು ದಿನ ಮಾತ್ರ; ಆದರೆ ಅದರಿಂದ ಉಂಟಾದ ವದಂತಿ ಮಾತ್ರ ಚಂದ್ರನನ್ನು ರಾಹು (ಸರ್ಪ) ನುಂಗಿದ ಸುದ್ದಿಯಂತೆ ಲೋಕವೆಲ್ಲಾ ವ್ಯಾಪಿಸಿಬಿಟ್ಟಿದೆ.

ஊரவர் கெளவை எருவாக அன்னைசொல்
நீராக நீளும்இந் நோய்.   (1147)

ಈ (ನನ್ನ) ಕಾಮ ವೇದನೆಯು ಊರವರ ವದಂತಿಯೆಂಬ ಸಾರದಿಂದಲೂ, ತಾಯಿಯ (ಕಟು) ಮಾತೆಂಬ ನೀರಿನಿಂದಲೂ ಸಮೃದ್ಧವಾಗಿ ಬೆಳೆಯುತ್ತಿದೆ.

நெய்யால் எரிநுதுப்பேம் என்றற்றால் கெளவையால்
காமம் நுதுப்பேம் எனல்.   (1148)

ವದಂತಿಯ ಮೂಲಕ ಕಾಮವನ್ನು ಆರಿಸುತ್ತೇವೆ ಎನ್ನುವುದು ತುಪ್ಪದಿಂದ ಬೆಂಕಿಯನ್ನು ಆರಿಸುವೆವು ಎಂದಂತೆ.

அலர்நாண ஒல்வதோ அஞ்சலோம்பு என்றார்
பலர்நாண நீத்தக் கடை.   (1149)

ಅಂಜಬೇಡ ಎಂದು ಹೇಳಿದ ನನ್ನ ಮನದನ್ನನೇ ಇಂದು ಹಲವರು ನಾಚಿಕೆ ಪಡುವಂತೆ ನನ್ನನ್ನಗಲಿ ಹೋಗಿರುವಾಗ, ಹಬ್ಬಿದ ವದಂತಿಗೆ ನಾನು ನಾಚಿಕೆ ಪಡಲು ಸಾಧ್ಯವೇ?

தாம்வேண்டின் நல்குவர் காதலர் யாம்வேண்டும்
கெளவை எடுக்கும்இவ் வூர்.   (1150)

ನಾವು ಬಯಸುವ ವದಂತಿಯನ್ನು ಈ ಊರಿನ ಜನರು ಎತ್ತಿ ಆಡುತ್ತಿದ್ದಾರೆ; ಅದರಿಂದ ಇನ್ನು ಮೇಲೆ ಇನಿಯನು ತಾನು ಬಯಸಿದರೆ, ನನ್ನನ್ನು ತನ್ನೊಡನೆ ಕರೆದು ಕೊಂಡು ಹೋಗಲು ಸಮ್ಮತಿಸುವನು.