ಆಪತ್ತಿನಲ್ಲಿ ಸ್ಥೈರ್ಯ

இடுக்கண் வருங்கால் நகுக அதனை
அடுத்தூர்வது அஃதொப்ப தில்.   (621)

ಆಪತ್ತು ಬಂದಾಗ (ಅಧೀರರಾಗದೆ) ನಗಬೇಕು; ಅದನ್ನು ಮೆಟ್ಟಿ ಸಹಿಸಿ ಗೆದ್ದುನಿಂತರೆ ಅದಕ್ಕೂಪ್ಪುವಂಥದು ಬೇರೆ ಇಲ್ಲ.

வெள்ளத் தனைய இடும்பை அறிவுடையான்
உள்ளத்தின் உள்ளக் கெடும்.   (622)

ಪ್ರವಾಹದಂತೆ ಮೇರೆವರಿದು ಬರುವ ಸಂಕಟವನ್ನು, ಅರಿವುಳ್ಳವನು ತನ್ನ ಮನಸ್ಸಿನಲ್ಲಿ ನೆನೆದು, ಧೈರ್ಯವಾಗಿ ಎದುರಿಸಬಲ್ಲವನಾದರೆ, ಆ ಸಂಕಟವು ಮಾಯವಾಗಿ ಬಿಡುವುದು.

இடும்பைக்கு இடும்பை படுப்பர் இடும்பைக்கு
இடும்பை படாஅ தவர்.   (623)

ಸಂಕಟವೊದಗಿ ಬಂದಾಗ, ಅದಕ್ಕಾಗಿ ದುಃಖಿಸಿ ಅಧೀರರಾಗದವರು, ಆ ಸಂಕಟಕ್ಕೇ ದುಃಖವನ್ನು ತಂದೊಡ್ಡಿ ಅದನ್ನೇ ಗೆದ್ದುಬಿಡುವರು.

மடுத்தவா யெல்லாம் பகடன்னான் உற்ற
இடுக்கண் இடர்ப்பாடு உடைத்து.   (624)

ಎಡರುಗಳನ್ನು ಎದುರಿಸುವ ಸಮಯದಲ್ಲೆಲ್ಲಾ ಗಾಡಿಯತ್ತಿನಂತೆ ಕಷ್ಟವನ್ನು ತಾಳಿಕೊಳ್ಳಬಲ್ಲನಾದರೆ, ಆ ಎಡರೇ ತೊಂದರೆಯಲ್ಲಿ ಸಿಕ್ಕಿ ನರಳುವುದು.

அடுக்கி வரினும் அழிவிலான் உற்ற
இடுக்கண் இடுக்கட் படும்.   (625)

ಸಂಕಟಗಳು ಒಂದರ ಮೇಲೊಂದರಂತೆ ದಾಳಿ ಇಟ್ಟು ಬಂದರೂ ಎದೆಗೆಡದೆ ತಾಳಬಲ್ಲವನಾದರೆ ಆ ಸಂಕಟಗಳೇ ಇಕ್ಕಟ್ಟಿನಲ್ಲಿ ಸಿಕ್ಕಿ ಪಾಡುಪಡುವುದು.

அற்றேமென்று அல்லற் படுபவோ பெற்றேமென்று
ஓம்புதல் தேற்றா தவர்.   (626)

ಸಿರಿಬಂದಾಗ ನಾವು 'ಪಡೆದಿದ್ದೇವೆ' ಎಂದು ಹೆಮ್ಮೆಯಿಂದ ಕಾದುಕೊಳ್ಳಲರಿಯದವರು, ಸಂಕಟ ಬಂದಾಗ 'ನಾವು ಸೋತೆವು' ಎಂದು ದುಃಖಪಡುವರೋ?

இலக்கம் உடம்பிடும்பைக் கென்று கலக்கத்தைக்
கையாறாக் கொள்ளாதாம் மேல்.   (627)

ದೊಡ್ಡವರು (ಜ್ಞಾನಿಗಳು) ಒಡಲು ಸಂಕಟಗಳಿಗೆ ತವರು ಎಂದು ತಿಳಿದಿರುವುದರಿಂದ, ಬಂದ ಸಂಕಟಗಳನ್ನು ಲೆಕ್ಕಿಸುವುದಿಲ್ಲ.

இன்பம் விழையான் இடும்பை இயல்பென்பான்
துன்பம் உறுதல் இலன்.   (628)

ಸುಖಾಮಿಷಗಳಿಗೆ ಆಸೆಪಡದವನು, ಸಂಕಟವನ್ನು ನೈಸರ್ಗಿಕವೆಂದು ಸಹಜವಾಗಿ ಪರಿಗಣಿಸುವವನು, ದುಃಖ ಬಂದಾಗ ಅದಕ್ಕಾಗಿ ವ್ಯರ್ಥಗೊಳಗಾಗುವುದಿಲ್ಲ.

இன்பத்துள் இன்பம் விழையாதான் துன்பத்துள்
துன்பம் உறுதல் இலன்.   (629)

ಸುಖಬಂದ ಕಾಲದಲ್ಲಿ ಸುಖವನ್ನು ಪೋಷಿಸದವನು, ದುಃಖ ಬಂದ ಕಾಲದಲ್ಲಿ ದುಃಖವನ್ನೂ ಅನುಭವಿಸುವುದಿಲ್ಲ.

இன்னாமை இன்பம் எனக்கொளின் ஆகுந்தன்
ஒன்னார் விழையுஞ் சிறப்பு.   (630)

ಒಬ್ಬನು ತನ್ನ ಪ್ರಯತ್ನದಲ್ಲಿ ಸಂಕಟವನ್ನೆ ಸುಖವೆಂದು ಸ್ವೀಕರಿಸಬಲ್ಲವನಾದರೆ, ಅವನ ಹಗೆಗಳೂ ಅವನನ್ನು ಮೆಚ್ಚುವ ಶ್ರೇಷ್ಠ ಗುಣವನ್ನು ಪಡೆಯುತ್ತಾನೆ.