ವಿನಯವಂತರಾಗಿರುವುದು

கருமத்தால் நாணுதல் நாணுந் திருநுதல்
நல்லவர் நாணுப் பிற.   (1011)

ತಾನು ಮಾಡಿದ ಹೇಯ ಕಾರ್ಯಗಳಿಗಾಗಿ ನಾಚುವುದೇ ವಿನಯವಂತಿಕೆಯೆನಿಸುವುದು; ಅದಲ್ಲದೆ ಸುಂದರಾಂಗನೆಯರ (ಸ್ವಾಭಾವಿಕ) ಬಾಚಿಕೆಯು ಬೇರೆ ಬಗೆಯದು.

ஊணுடை எச்சம் உயிர்க்கெல்லாம் வேறல்ல
நாணுடைமை மாந்தர் சிறப்பு.   (1012)

ಊಟ, ಬಟ್ಟೆ ಮಿಕ್ಕೆಲ್ಲವುಗಳೂ ಜೀವಿಗಳಿಗೆಲ್ಲ ಸಾಮಾನ್ಯವಾದ ಗುಣ; ಆದರೆ ವಿನಯವಂತಿಕೆಯನ್ನು ಗಳಿಸುವುದು ಸದ್ಗುಣವುಳ್ಳ ಮಾನವರ ವಿಶಿಷ್ಟ ಗುಣ.

ஊனைக் குறித்த உயிரெல்லாம் நாண்என்னும்
நன்மை குறித்தது சால்பு.   (1013)

ಎಲ್ಲಾ ಜೀವಿಗಳಿಗೂ ಮಾಂಸ ಮಜ್ಜೆಗಳಿಂದ ಕೂಡಿದ ಶರೀರವೇ ನೆಲೆಯಾಗಿರುವಂತೆ, ಸಜ್ಜನಿಕೆಗೆ ನಾಚಿಕೆಯೆನ್ನುವ ನಮ್ರಗುಣವೇ ನೆಲೆಯಾಗಿರುವುದು.

அணிஅன்றோ நாணுடைமை சான்றோர்க்கு அஃதின்றேல்
பிணிஅன்றோ பீடு நடை.   (1014)

ಸಜ್ಜನರಿಗೆ ವಿನಯವಂತಿಕೆ ಎನ್ನುವುದು ಒಂದು ಅಲಂಕಾರವಲ್ಲವೇ? ಆ ಅಲಂಕಾರವಿಲ್ಲದೆ ಹೋದಲ್ಲಿ ದೊಡ್ಡ ರೀತಿಯ ನಡೆಯು ಒಂದು ಕುತ್ತು (ರೋಗ) ಎನಿಸಿಕೊಳ್ಳುವುದಿಲ್ಲವೆ?

பிறர்பழியும் தம்பழியும் நாணுவார் நாணுக்கு
உறைபதி என்னும் உலகு.   (1015)

ಇತರರ ಮೇಲಿನ ನಿಂದೆಗಾಗಲೀ, ತಮ್ಮ ಮೇಲಿನ ನಿಂದೆಗಾಗಲೀ ನಾಚಿಕೊಳ್ಳುವ ಸ್ವಭಾವವುಳ್ಳವರನ್ನು ವಿನಯವಂತಿಕೆಯ ಆವಾಸಸ್ಥಾನವಾಗಿರುವರೆಂದು ಲೋಕವು ಹೇಳುತ್ತದೆ.

நாண்வேலி கொள்ளாது மன்னோ வியன்ஞாலம்
பேணலர் மேலா யவர்.   (1016)

ವಿನಯವಂತಿಕೆಯೆಂಬ ಬೇಲಿಯನ್ನು ತಮ್ಮ ಸುತ್ತ ಹಾಕಿಕೊಳ್ಳದೆ, ಮೇಲಾದವರು (ದೊಡ್ಡವರು) ಈ ವಿಶಾಲವಾದ ಪ್ರಪಂಚದಲ್ಲಿ ಬಾಲುವೆ ನಡೆಸಲು ಇಚ್ಚಿಸುವುದಿಲ್ಲ.

நாணால் உயிரைத் துறப்பர் உயிர்ப்பொருட்டால்
நாண்துறவார் நாணாள் பவர்.   (1017)

ವಿನಯವೇ ತಮ್ಮ ಗುಣವಾಗಿ ಉಳ್ಳವರು ಅದಕ್ಕಾಗಿ ತಮ್ಮ ಜೀವವನ್ನು ಕೊಡುವರು; ಜೀವವನ್ನು ಕಾಪಾಡುವ ಹಣಕ್ಕಾಗಿ ತಮ್ಮ ವಿನಯವನ್ನು (ಎಂದಿಗೂ) ಬಿಡುವುದಿಲ್ಲ

பிறர்நாணத் தக்கது தான்நாணா னாயின்
அறம்நாணத் தக்கது உடைத்து.   (1018)

ಇತರರು ನಾಚುವಂಥ ಹೀನಕೆಲಸಕ್ಕೆ ತಾನು ನಾಚದೆ ಇರುವ ಪಕ್ಷದಲ್ಲಿ ಧರ್ಮವು ಅಂಥವನನ್ನು ಕಂಡು ನಾಚಿ ಕೈಬಿಡುತ್ತದೆ.

குலஞ்சுடும் கொள்கை பிழைப்பின் நலஞ்சுடும்
நாணின்மை நின்றக் கடை.   (1019)

ಒಬ್ಬನು ನಡತೆ ತಪ್ಪಿದರೆ, ಅದು ಅವನ ಕುಲವನ್ನು ಸುಟ್ಟು ನಾಶಮಾಡುತ್ತದೆ; ವಿನಯವನ್ನು ಕೈಬಿಟ್ಟರೆ ಅದು ಅವನ ಏಳ್ಗೆಯೆಲ್ಲವನ್ನೂ ನಾಶ ಮಾಡುತ್ತದೆ.

நாண்அகத் தில்லார் இயக்கம் மரப்பாவை
நாணால் உயிர்மருட்டி அற்று.   (1020)

ಅಂತರಂಗದಲ್ಲಿ ನಾಚಿಕೆ ಪಡೆದಿರುವವರು ಲೋಕದಲ್ಲಿ ಓಡಾಡುವುದು, ಸೂತ್ರದ ದಾರದಿಂದ ಚಲಿಸುತ್ತ ಜೀವವಿರುವಂತೆ ಭ್ರಮೆಯನ್ನು ಹುಟ್ಟಿಸುವ ಮರದ ಬೊಂಬೆಯನ್ನು ಹೋಲುವುದು.