ಕಾಮಿನಿಯ ಸೌಂದರ್ಯ ಬಾಧೆ

அணங்குகொல் ஆய்மயில் கொல்லோ கனங்குழை
மாதர்கொல் மாலும் என் நெஞ்சு.   (1081)

(ಇವಳು) ದೇವಕನ್ನಿಕೆಯೋ, ಆಯ್ದುತಂದ ವಿಶಿಷ್ಟವಾದ ನವಿಲೋ, ದಟ್ಟವಾದ ಕೇಶ ರಾಶಿಯಿಂದ ಅಲಂಕರಿಸಲ್ಪಟ್ಟ ಮಾನವ ಸ್ತ್ರೀಯೋ, (ಎಂದು) ನನ್ನ ಹೃದಯವು ಭ್ರಮಿತವಾಗಿದೆ.

நோக்கினாள் நோக்கெதிர் நோக்குதல் தாக்கணங்கு
தானைக்கொண் டன்ன துடைத்து.   (1082)

ಸೌಂದರ್ಯದ ರಾಶಿಯಾದ ಈ ಹೆಣ್ಣು ನನ್ನ ನೋಟಕ್ಕೆ ಪ್ರತಿಯಾಗಿ ಬೀರಿದ ನೋಟವು-ದೇವಕನ್ನಿಕೆಯು ಆಕ್ರಮಣ ನಡೆಸಲು ತಾನೇ ಸೈನ್ಯದೊಂದಿಗೆ ಎದುರಾಗುತ್ತಿರುವಂತೆ ತೋರುತ್ತಿದೆ.

பண்டறியேன் கூற்றென் பதனை இனியறிந்தேன்
பெண்டகையால் பேரமர்க் கட்டு.   (1083)

ಈ ಹಿಂದೆ ಕಾಲನನ್ನು ಕಣ್ಣು ಅರಿಯೆನು. ಈಗ ಕಂಡು ಅರಿತೆನು; ಅದು ಹೆಣ್ತನದ ಸಹಾಯದಿಂದ ಹೋರಾಟ ನಡೆಸುವ ಕಣ್ಣುಳ್ಳದು ಎಂದು.

கண்டார் உயிருண்ணும் தோற்றத்தால் பெண்டகைப்
பேதைக்கு அமர்த்தன கண்.   (1084)

ಹೆಣ್ಣಿಗೆ ಸಹಜವಾದ ಗುಣದಿಂದ ಶೋಭಿಸುವ ಈ ಬಾಲೆಯ ಕಣ್ಣುಗಳು ತಮ್ಮನ್ನು ಕಂಡವರ ಪ್ರಾಣವನ್ನೇ ಹೀರುವಂತೆ ಹೋರಾಟ ನಡೆಸುತ್ತಿವೆ.

கூற்றமோ கண்ணோ பிணையோ மடவரல்
நோக்கமிம் மூன்றும் உடைத்து.   (1085)

ಕಾಲನೋ, ಕಣ್ಣೋ, ಹರಿಣಿಯೋ?- ಈ ಎಳೆಯ ಹೆಣ್ಣಿನ ನೋಟದಲ್ಲಿ ಈ ಮೂರು ಭಾವಗಳೂ ತುಂಬಿಕೊಂಡಿವೆ.

கொடும்புருவம் கோடா மறைப்பின் நடுங்கஞர்
செய்யல மன்இவள் கண்.   (1086)

ಈ ಎಳೆವೆಣ್ಣಿನ ಕೊಂಕಿ ಬಾಗಿದ ಹುಬ್ಬುಗಳು, ಕೊಂಕದೆ ಅವಳ ಕಣ್ಣುಗಳನ್ನು, ತನ್ನ ಮರೆಯಲ್ಲಿ ಅಡಗಿಸಿಕೊಂಡರೆ, ಅವು ನನಗೆ ನಡುಕ ಹುಟ್ಟಿಸುವಂಥ ವೇದನೆಗೆ ಗುರಿ ಮಾಡಲಾರವು.

கடாஅக் களிற்றின்மேற் கட்படாம் மாதர்
படாஅ முலைமேல் துகில்.   (1087)

ಈ ಎಳೆವೆಣ್ಣಿನ ನಿಮಿರಿನಿಂತ ಕಠಿಣ ಕುಚಗಳ ಮೇಲೆ ಮರೆಮಾಡಿದ ವಸ್ತ್ರವು ಮದಿಸಿದಾನೆಯ ಮೇಲೆ ಹೊದೆಸಿದ ಮುಖ ವಸ್ತ್ರವನ್ನು ಹೋಲುತ್ತಿದೆ.

ஒண்ணுதற் கோஒ உடைந்ததே ஞாட்பினுள்
நண்ணாரும் உட்குமென் பீடு.   (1088)

ಯುದ್ದ ಕಣದಲ್ಲಿ ಎದುರಾಳಿಗಳು ಕೇಳಿ ಭಯ ಪಡುವಂಥ ನನ್ನ ಪರಾಕ್ರಮವು, ಇವಳ ಪ್ರಕಾಶಮಾನ ಕಣ್ಣುಗಳ ದಾಳಿಯಿಂದ ಸೋಲನ್ನು ಅನುಭವಿಸುತ್ತಿದೆಯಲ್ಲ!

பிணையேர் மடநோக்கும் நாணும் உடையாட்கு
அணியெவனோ ஏதில தந்து.   (1089)

ಹರಿಣವನ್ನು ಹೋಲುವ ಕಣ್ಣೋಟವೂ ಲಜ್ಜೆಯೂ ಉಳ್ಳ ಇವಳಿಗೆ (ಈ ಎಳೆವೆಣ್ಣಿಗೆ) ಇತರ ಆಭರಣಗಳಿಂದ ಅಲಂಕರಿಸಲೇಕೆ?

உண்டார்கண் அல்லது அடுநறாக் காமம்போல்
கண்டார் மகிழ்செய்தல் இன்று.   (1090)

ಮದ್ಯವು ತನ್ನನ್ನು ರುಚಿ ನೋಡಿದವರಿಗಲ್ಲದೆ ಕಾಮದಂತೆ ಕಂಡವರಿಗೆಲ್ಲ ಮಾದಕತೆಯನ್ನು ತರುವುದಿಲ್ಲ.