ನೆರವಿಗೆ ಬಾರದ ಸಿರಿ

வைத்தான்வாய் சான்ற பெரும்பொருள் அஃதுண்ணான்
செத்தான் செயக்கிடந்தது இல்   (1001)

ಒಬ್ಬನು ಮನೆತುಂಬ ಹೇರಳವಾದ ಸಿರಿಯನ್ನು ಸಂಗ್ರಹಿಸಿಟ್ಟು ಅದನ್ನು ಅನುಭವಿಸದೆ ಹೋದಲ್ಲಿ, ಬದುಕ್ಕಿದ್ದೂ ಸತ್ತಹಾಗೆ; ಆ ಸಿರಿಯಿಂದ ಯಾವ ಉಪಯೋಗವೂ ಇಲ್ಲವಾಗುವುದು.

பொருளானாம் எல்லாமென்று ஈயாது இவறும்
மருளானாம் மாணாப் பிறப்பு.   (1002)

ಸಿರಿಯಿಂದಲೇ ಎಲ್ಲ (ಸುಖ ಸಾಧನಗಳು) ಉಂಟಾಗುವುದೆಂದು ತಿಳಿದು ಪರರಿಗೆ ಕೂಡದಿರುವ ಕೈಪಣತನದ ಭ್ರಮೆಯಿಂದ ಕೀಳಾದ ಜನ್ಮ ಉಂಟಾಗುವುದು.

ஈட்டம் இவறி இசைவேண்டா ஆடவர்
தோற்றம் நிலக்குப் பொறை.   (1003)

ಕೂಡಿಟ್ಟ ಸಿರಿಯನ್ನೇ ಬಯಸುತ್ತ (ಶಾಶ್ವತವಾದ) ಕೀರ್ತಿಯನ್ನು ಕಡೆಗಣಿಸುವ ಜನರ ಬಾಳು, ಭೂಮಿಗೆ ಭಾರವಾಗುರುವುದು.

எச்சமென்று என்எண்ணுங் கொல்லோ ஒருவரால்
நச்சப் படாஅ தவன்.   (1004)

ಪರೋಪಕಾರ ಗುಣದಿಂದ ಒಬ್ಬರ ಪ್ರೀತಿಗೂ ಪಾತ್ರನಾಗದವನು, ತಾನು ಸತ್ತಮೇಲೆ ತನ್ನ ಬಳಿ ಯಾವುದು ಸ್ಥಿರವಾಗಿ ಉಳಿಯುವುದೆಂದು ಭಾವಿಸುತ್ತಾನೆ?

கொடுப்பதூஉம் துய்ப்பதூஉம் இல்லார்க்கு அடுக்கிய
கோடியுண் டாயினும் இல்.   (1005)

ಪರರಿಗೆ ಕೊಡುವ ಉದಾರ ಬುದ್ಧಿಯಾಗಲೀ, ತಾನು ಅನುಭವಿಸಿ ಸುಖಪಡುವ ಧಾರಾಳ ಬುದ್ಧಿಯಾಗಲೀ ಇಲ್ಲದವರಿಗೆ ಮೇಲೆ ಮೇಲೆ ಹೇರಿಸಿಟ್ಟ ಹಣ ಕೋಟಿಗಟ್ಟಲೆ ಬಂದೂದಗಿದರೂ ಅದರಿಂದ ಪ್ರಯೋಜನವಿಲ್ಲ.

ஏதம் பெருஞ்செல்வம் தான்துவ்வான் தக்கார்க்கொன்று
ஈதல் இயல்பிலா தான்.   (1006)

ತಾನು ಅನುಭವಿಸದೆ, ತಕ್ಕವರಿಗೆ ಕೊಟ್ಟು ನೆರವಾಗುವ ಸ್ವಭಾವವೂ ಇಲ್ಲದೆ ಬಾಳುವವನು, ತನ್ನಲಿರುವ ಹೇರಳವಾದ ಹಣಕ್ಕೆ ತಾನೇ ಕುತ್ತಾಗಿ ಪರಿಣಮಿಸುವನು.

அற்றார்க்கொன்று ஆற்றாதான் செல்வம் மிகநலம்
பெற்றாள் தமியள்மூத் தற்று.   (1007)

ಕೈಲಾಗದ ಬಡ ಜನರಿಗೆ ಸಹಾಯ ಮಾಡದವನ ಸಿರಿಯು, ಅತಿ ಸುಂದರಿಯಾದ ಒಬ್ಬ ಹೆಣ್ಣು (ಗಂಡನಿಲ್ಲದೆ) ಏಕಾಂಗಿಯಾಗಿ ಬಾಳಿ ಮುದುಕಿಯಾದಂತೆ.

நச்சப் படாதவன் செல்வம் நடுவூருள்
நச்சு மரம்பழுத் தற்று.   (1008)

ಪರೋಪಕಾರ ಗುಣವಿಲ್ಲದೆ ಯಾರಿಗೂ ಬೇಡಾದವನ ಸಿರಿಯು ಊರಿನ ಮಧ್ಯದಲ್ಲಿ ವಿಷಪೂರಿತವಾದ ಇಟ್ಟಿಯ ಮರವು ಫಲ ಬಿಟ್ಟಂತೆ.

அன்பொரீஇத் தற்செற்று அறநோக்காது ஈட்டிய
ஒண்பொருள் கொள்வார் பிறர்.   (1009)

ಪ್ರೀತಿ ಇಲ್ಲದೆ. ತನ್ನನ್ನು ಕಷ್ಟಕ್ಕೆ ಗುರಿಪಡಿಸಿಕೊಂಡು, ಧರ್ಮವನ್ನು ಲೆಕ್ಕಿಸದೆ, ಸೇರಿಸಿಟ್ಟ ಒಬ್ಬನ ಹೇರಳವಾದ ಸಿರಿಯನ್ನು (ಕೊನೆಯಲ್ಲಿ) ಪಡೆದು ಅನುಭವಿಸುವವರು ಬೇರೆಯವರೇ.

சீருடைச் செல்வர் சிறுதுனி மாரி
வறங்கூர்ந் தனையது உடைத்து.   (1010)

ಕೀರ್ತಿಶಾಲಿಗಳಾದ ಸಿರಿವಂತರ ಅಲ್ಪ ಕಾಲದ ಬಡತನವು, ಲೋಕದನೆಲೆಗೆ ಕಾರಣವಾದ ಮೋಡಗಳು ಆಕಾಶದಲ್ಲಿ ಚೆದುರಿ ಬಡವಾದಂತೆ.