ಸಂಕೇತ ಪರಿಜ್ಞಾನ

இருநோக்கு இவளுண்கண் உள்ளது ஒருநோக்கு
நோய்நோக்கொன் றந்நோய் மருந்து.   (1091)

ಇವಳ (ಈ ಎಳೆವೆಣ್ಣಿನ) ಕಪ್ಪು ಹಚ್ಚಿದ ಕಣ್ಣುಗಳಲ್ಲಿ ಎರಡು ಬಗೆಯಾದ ನೋಟವಿದೆ. ಒಂದು ಯಾತನೆಯುಂಟು ಮಾಡಿದರೆ ಮತ್ತೊಂದು ಯಾತನೆಯನ್ನು ಪರಿಹರಿಸುವುದು

கண்களவு கொள்ளும் சிறுநோக்கம் காமத்தில்
செம்பாகம் அன்று பெரிது.   (1092)

ತನ್ನ ಕಣ್ಣುಗಳಿಂದಲೇ ನನ್ನನ್ನು ಅಪಹರಿಸಿರುವ ಈ ಎಳೆವೆಣ್ಣಿನ ಕಿರು ನೋಟವು, ಸಂಭೋಗ ಸುಖದಲ್ಲಿ ಕೇವಲ ಅರ್ಧಭಾಗಮಾತ್ರವಲ್ಲ ಅದಕ್ಕಿಂತ ಅಧಿಕ ಸುಖವನ್ನು ನೀಡುವುದು.

நோக்கினாள் நோக்கி இறைஞ்சினாள் அஃதவள்
யாப்பினுள் அட்டிய நீர்.   (1093)

ನನ್ನನ್ನು ನೋಡಿದಳು; ನೋಡಿ ನಾಚಿ ತಲೆ ತಗ್ಗಿಸಿದಳು; ಅದು ಅವಳು ಪೋಷಿಸುವ ಪ್ರೇಮಲತೆಗೆ ಸುರಿದ ನೀರಿನಂತೆ.

யான்நோக்கும் காலை நிலன்நோக்கும் நோக்காக்கால்
தான்நோக்கி மெல்ல நகும்.   (1094)

ನಾನು ನೋಡುವಾಗ ಅವಳು ನೆಲವನ್ನು ನೋಡುವಳು; ನಾನು ನೋಡದಿರುವಾಗ (ನನ್ನನ್ನು) ನೋಡಿ ಕುಡಿನಗೆ ಸೂಸುವಳು.

குறிக்கொண்டு நோக்காமை அல்லால் ஒருகண்
சிறக்கணித்தாள் போல நகும்.   (1095)

ನನ್ನನ್ನು ನೇರವಾಗಿ ನೋಡದಿರುವುದು ಮಾತ್ರವಲ್ಲದೆ, ಒಂದು ಕಣ್ಣನ್ನು ಅರೆ ಮುಚ್ಚಿದ ಹಾಗೆ ಮಾಡಿ, ಕಡೆಗಣ್ಣ ನೋಟದಿಂದ ನೋಡಿ ನಗುವಳು.

உறாஅ தவர்போல் சொலினும் செறாஅர்சொல்
ஒல்லை உணரப் படும்.   (1096)

ಹೊರ ನೋಟಕ್ಕೆ ಅವರು ಅಪರಿಚಿತರಂತೆ (ಕುಪಿತ) ಸಂಭಾಷಣೆ ನಡೆಸಿದರೂ, ಅದು ನಿಜವಾಗಿ ವೈರವಿಲ್ಲದ ಪ್ರಣಯ ಸಲ್ಲಾಪ ಎಂಬುದು ಒಡನೆಯೇ ತಿಳಿಯುವುದು.

செறாஅச் சிறுசொல்லும் செற்றார்போல் நோக்கும்
உறாஅர்போன்று உற்றார் குறிப்பு.   (1097)

ಹೊರ ನೋಟಕ್ಕೆ ಅಪರಿಚಿತರ ರೀತಿಯಲ್ಲಿ ಆಡುವ ಕಠಿಣ ಮಾತುಗಳೂ ಹಗೆಗಳಂತೆ ಕಾಣುವ ನೋಟವೂ ಪ್ರಣಯಿಗಳ ಅಂತರಂಗವನ್ನು ಕುರಿತ ಸಂಕೇತವೇ ಆಗುವುದು.

அசையியற்கு உண்டாண்டோர் ஏஎர்யான் நோக்கப்
பசையினள் பைய நகும்.   (1098)

ನಾನು ನೋಡುವಾಗ (ಅವಳು) ಪ್ರೇಮಾರ್ದ್ರಳಾಗಿ ಮೈದು ನಗೆ ಸೂಸುವಳು; ಲತಾಂಗಿಯಾದ ಅವಳಲ್ಲಿ ಆಗ ಒಂದು ಬಗೆಯ ಚೆಲುವು ಅರಳುವುದು.

ஏதிலார் போலப் பொதுநோக்கு நோக்குதல்
காதலார் கண்ணே உள.   (1099)

ಅಪರಿಚಿತರಂತೆ ಸಾಮಾನ್ಯ ನೋಟದಿಂದ ನೋಡುವುದು ಪ್ರಣಯಿಗಳಲ್ಲಿ ಸಾಮಾನ್ಯ.

கண்ணொடு கண்இணை நோக்கொக்கின் வாய்ச்சொற்கள்
என்ன பயனும் இல.   (1100)

ಕಣ್ಣೊಡನೆ ಕಣ್ಣುಗಳು ಒಂದಾಗಿ ಕೂಡಿ ಒಲವು ಸಂಭಾಷಣೆ ನಡೆಸಿದಲ್ಲಿ ಬರಿಯ ಬಾಯಿ ಮಾತುಗಳಿಂದ ಯಾವ ಪ್ರಯೋಜನವೂ ಇರುವುದಿಲ್ಲ.